ಚೈಲ್ಡ್, ಗೋರ್ಡನ್
	 1892-1957. ಒಬ್ಬ ಆಸ್ಟ್ರೇಲಿಯನ್ ಪ್ರಾಗಿತಿಹಾಸಜ್ಞ. ಜನನ 1892ರ ಆಗಸ್ಟ್ 14ರಂದು, ಆಸ್ಟ್ರೇಲಿಯದ ಸಿಡ್ನಿ ನಗರದಲ್ಲಿ, ಸಿಡ್ನಿ ವಿಶ್ವವಿದ್ಯಾಲಯದಲ್ಲಿ ಪದವೀಧರರಾಗಿ ಇಂಗ್ಲೆಂಡಿನ ಆಕ್ಸ್‍ಫರ್ಡ್ ವಿದ್ಯಾಲಯದ ಕ್ವೀನ್ಸ್ ಕಾಲೇಜಿನಲ್ಲಿ ಆನರ್ಸ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದರು. ಆಕ್ಸ್‍ಫರ್ಡಿನಲ್ಲಿ ಆರ್ತರ್ ಇವಾನ್ಸ್ ಮತ್ತು ಜಾನ್ ಲಿಂಟನ್ ಮೈರ್ಸರ ಮಾರ್ಗದರ್ಶನದಲ್ಲಿ ಇವರು ಇಂಡೋ-ಯೂರೋಪಿಯನ್ ಭಾಷೆಗಳ ಮೇಲೆ ಪರಿಣಾಮ ಬೀರಿದ ಪುರಾತತ್ವ ವಿಚಾರಗಳನ್ನು ಕುರಿತ ಸಂಶೋಧನೆ ನಡೆಸಿದರು. ಗ್ರಿಸ್, ಬಾಲ್ಕನ್ಸ್ ಮತ್ತು ಮದ್ಯ ಯೂರೋಪಿನಲ್ಲಿ ಪ್ರವಾಸ ಕೈಗೊಂಡು ಆ ಭಾಗಗಳ ಪ್ರಾಗಿತಿಹಾಸವನ್ನು ಆಳವಾಗಿ ಅಭ್ಯಸಿಸಿದರು. ಅನಂತರ ಲಂಡನ್ ನಗರದ ರಾಯಲ್ ಆಂತ್ರೋಪಲಾಜಿಕಲ್ ಇನ್‍ಸ್ಟಿಟ್ಯೂಟಿನ ಗ್ರಂಥಪಾಲರಾಗಿದ್ದರು. ಇವರ ದಿ ಆರ್ಯನ್ ಎಂಬ ಕೃತಿ 1926ರಲ್ಲಿ ಪ್ರಕಟವಾಯಿತು. ಇವರು 1927ರಲ್ಲಿ ಎಡಿನ್‍ಬರೊ ವಿಶ್ವವಿದ್ಯಾಲಯದಲ್ಲಿ ಪ್ರಾಗಿತಿಹಾಸ ಪುರಾತತ್ವದ ಪ್ರಥಮ ವಿಭಾಗದ ನಿರ್ದೇಶಕರಾದರು. ಕ್ರಿ.ಪೂ. 3ನೆಯ ಮತ್ತು 2ನೆಯ ಸಹಸ್ರಮಾನಗಳ ಐರೋಪ್ಯ ಪ್ರಾಗಿತಿಹಾಸವನ್ನು ಕ್ರಮಬದ್ಧವಾಗಿ ಅಧ್ಯಯನ ಮಾಡಿ ಯೂರೋಪಿಗೂ ಪ್ರಾಚ್ಯಕ್ಕೂ ಇದ್ದ ಸಂಬಂಧಗಳೇನೆಂಬುದನ್ನು ವಿವೇಚಿಸಿದರು. ಯೂರೋಪಿನ ಪ್ರಾಚೀನ ಅನಾಗರಿಕ ಸಂಸ್ಕøತಿಗಳ ಸ್ವರೂಪ ಗುಣಗಳ ಪರಿಶೀಲನೆ ನಡೆಸಿದರು. ವಿಶಾಲ ಜ್ಞಾನಕ್ಷೇತ್ರದ ಅಧ್ಯಯನ ಮಾಡಿ, ವೈವಿಧ್ಯಪೂರಿತವಾದ ನಾನಾ ಅಂಶಗಳ ನಡುವಣ ಸಾಮರಸ್ಯವನ್ನು ತೋರಿಸಿಕೊಟ್ಟಿದ್ದು ಇವರ ಮಹಾಸಾಧನೆ. ಪ್ರಾಗಿತಿಹಾಸಾಬ್ಯಾಸದಲ್ಲಿ ಅಂತರರಾಷ್ಟ್ರೀಯ ದೃಷ್ಟಿಯಿರಬೇಕೆಂಬುದು ಇವರು ತಳೆದಿದ್ದ ನಿಲುವು. ಇದು ಪ್ರಾಗಿತಿಹಾಸ ಅಧ್ಯಯನದ ಹೊಸ ಪರಂಪರೆಯನ್ನೇ ಸ್ಥಾಪಿಸಿತೆನ್ನಬಹುದು. ಸಾಮಾಜಿಕ ಹಾಗೂ ತಂತ್ರಶಾಸ್ತ್ರೀಯ ಅಭಿವೃದ್ಧಿಯ ಬೆಳಕಿನಲ್ಲಿ ಇವರು ಬರೆದ ಗ್ರಂಥಗಳು ಹೆಚ್ಚು ಜನಪ್ರಿಯವಾಗಿವೆ. ಪ್ರಪಂಚದಲ್ಲೆ ಇವರು ಆ ತಲೆಮಾರಿನ ಮಹಾ-ಪುರಾತತ್ವಜ್ಞರೆನ್ನಬಹುದು. 1925ರಲ್ಲಿ ಇವರ ದಿ ಡಾನ್ ಆಫ್ ಯೂರೋಪಿಯನ್ ಸಿವಿಲಿಸೇಷನ್ ಪ್ರಕಟವಾಯಿತು. ಇವರು ಬದುಕಿದ್ದಾಗ ಈ ಗ್ರಂಥ ಆರು ಆವೃತ್ತಿಗಳನ್ನು ಕಂಡಿತು. ದಿ ಡ್ಯಾನ್ಯೂಬ್ ಇನ್-ಪ್ರಿ-ಹಿಸ್ಟೊರಿ 1929ರಲ್ಲಿ ಪ್ರಕಟವಾದ ಗ್ರಂಥ. ಯೂರೋಪಿನ ಪ್ರಾಗಿತಿಹಾಸವನ್ನು ಕುರಿತ ಅಭಿಜಾತ ಕೃತಿಯಿದು. ಪೀಸಿಂಗ್ ಟುಗೆದರ್ ದಿ ಪಾಸ್ಟ್, ನ್ಯೂ ಲೈಟ್ ಆನ್ ದಿ ಮೋಸ್ಟ್ ಏನ್ಸೆಂಟ್ ಈಸ್ಟ್, ಮ್ಯಾನ್ ಮೇಕ್ಸ್ ಹಿಮ್ಸೆಲ್ಫ್ —ಇವು ಇವರ ಇತರ ಕೃತಿಗಳು.

ಚೈಲ್ಡ್ 1936ರಲ್ಲಿ ಹಾರ್ವಡ ವಿಶ್ವವಿದ್ಯಾಲಯದಲ್ಲಿ ನಡೆದ ಕಲೆ ಮತ್ತು ವಿಜ್ಞಾನ ಸಮ್ಮೇಳನಕ್ಕೆ ಪ್ರಾಗಿತಿಹಾಸ ವಿಭಾಗದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದರು. 1940ರಲ್ಲಿ ಬ್ರಿಟಿಷ್ ಅಕಾಡೆಮಿಯ ಫೆಲೊ ಆದರು. 1937ರ ಅಕ್ಟೋಬರ್ 19ರಂದು ಇವರು ಮರಣ ಹೊಂದಿದರು. 
(ಎಂ.ಎಸ್.ಎನ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ